ಕ್ಷೌರ ಸಂಕಟ..
ಚಂದದ ಕನ್ನಡಿಗಳನಡುವೆ ಕಣ್ಣರಳಿಸಿ
ಪ್ರತಿ ದಿಕ್ಕಿನಲ್ಲೂ ನನ್ನನೇ ನೋಡುತ ಕುಳಿತಿರಲು
ಕುರ್ಚಿಗೊಂದು ಹಲಗೆಇರಿಸಿ ರಾಜಸಿಂಹಾಸನಕೆ ಕರೆಬರುತಿತ್ತು,
ಕೂರುವಾಸೆ-ಆದರೂ ದಿಗ್ಗನೆ ಆವರಿಸುವ ಭಯ.
ಹಣಿಕೆ ಕತ್ತರಿಗಳ ಅಂಚಿಗೆಸಿಲುಕಿ ಅರೆದೇಹವಾಗಿ ನರಳಿದಂತನಿಸುವ
ಅಜ್ಜಿಯ ತೈಲಪೋಷಣೆಗೆ ಹುಲುಸಾಗಿಬೆಳೆದ ಕೇಶರಾಶಿ,
ಬಿದ್ದರೂ ಮೂಗಿನಂಚನಾವರಿಸಿ ಮೈತುಂಬ ಚೆಲ್ಲಲು
ತಲೆಗೊಡವಿ ಓಡುವ ತವಕ.. ಗದರಿಕೆಯ ಮಾರ್ದನಿ.
ಅಮ್ಮನ ಓಲೈಕೆ.. ನಂತರ ದೊರಕುವ ಸಿಹಿ ತಿಂಡಿಗಳ ಸಂಭ್ರಮ.
ಬೇಡವಾದ ಕ್ಷೌರ.. ಗುಮ್ಮನಂತಹ ಕ್ಷೌರಿಕ.. ನನ್ನ ಪೆಚ್ಚು ಮೋರೆ.
ಹಿಂದಿನ ಕ್ಷೌರದಿ ತಲೆಗೊಡವಿ ತರಿದ ಗಾಯ ವಸರಿದ ರಕ್ತ
ಸ್ನಾನದ ಬಿಸಿನೀರಿಗೆ ದ್ವಿಗುಣಗೊಂಡ ಗಾಯದ ಉರಿಯನೆನೆದು
ಉಮ್ಮಳಿಸಿ ಬರುವ ದುಃಖ ಅದುಮಿಟ್ಟರೂ ಆವರಿಸುವ ಅಳು
ಮುಸು ಮುಸು ಅಳುತಿರಲು ಕಂಬನಿಒರೆಸಲು ಯಾವ ಕೈಗಳೂ ಇಲ್ಲ..
ಇಚ್ಛೆಯಂತೆ ತಿರುಗಾಡಿ ನಿಮಿಷದಿ ಬೀದಿಯ ಸುತ್ತಿಬರುತಿದ್ದ ಕಾಲುಗಳನ್ನು
ಇಷ್ಟವಿಲ್ಲದ ಸ್ಥಳದಿ ಸುಮ್ಮನಿರಿಸಿ ಆ ಹೊತ್ತಿನ ಅಸಾಧಾರಣ ಸಾಧನೆಗಳ
ಪ್ರತಿಬಂಧಿಸಿದಕ್ಕಾಗಿ ನನ್ನ ಮನವ ಶಪಿಸುವಂತೆ ಭಾಸವಾಗುತಿತ್ತು...
ಇದನ್ನೆಲ್ಲ ಕಂಡು ನಗುತಿದ್ದ ಕ್ಷೌರಿಕ ಶತ್ರುವಿನಂತೆಯೂ
ಕರೆತಂದ ತಾಯಿ ನಿಷ್ಕರುಣಿಯಂತೆಯೂ
ಹಿಂದೆ ಕುಳಿತವರು ಅಸಹಾಯಕರಂತೆಯೂ
ಎದುರಿನ ಕನ್ನಡಿಯೊಂದೇ ನನಗಾಗಿ ಅಳುವಂತೆಯೂ ಭಾಸವಾಗುತಿತ್ತು..
📝NPK...

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ